ಬಾಗಲಕೋಟೆ
ಆ.21- ಆಡಳಿತಾರೂಢ ಕಾಂಗ್ರೆಸ್‍ನ ಶಾಸಕರ ಸಂಬಂಧಿಯೊಬ್ಬರು ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದು ಹಾಲಿ ಅಧಿಕಾರಿಯ ಮೇಲೆ ದರ್ಪ ಪ್ರದರ್ಶಿಸಿದ ಘಟನೆ ನಡೆದಿದೆ.
ಬಾಗಲಕೋಟೆಯ ಡಿಎಚ್‍ಒ ಆಗಿ ಡಾ.ಜಯಶ್ರೀ ಎಮ್ಮಿ ಕೆಲಸ ಮಾಡುತ್ತಿದ್ದರು.ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಚ್.ವೈ.ಮೇಟಿ ಅವರ ಅಳಿಯ ಡಾ.ರಾಜಕುಮಾರ್ ಎರಗಲ್ ಅವರು ವಿಜಯಪುರದಿಂದ ಬಾಗಲಕೋಟೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಜಯಶ್ರೀ ಅವರು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರೂ ಅದನ್ನು ರಾಜ್‍ಕುಮಾರ್ ಎರಗಲ್ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
ಜಯಶ್ರೀ ಅವರು ಒಂದು ದಿನ ರಜೆಯಲ್ಲಿದ್ದ ವೇಳೆ ಏಕಾಏಕಿ ಕಚೇರಿಗೆ ಬಂದು ಏಕಮುಖವಾಗಿ ರಾಜ್‍ಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಮಾರನೆಯ ದಿನ ಕಚೇರಿಗೆ ಬಂದ ಜಯಶ್ರೀ ಅವರಿಂದ ಹಾಜರಾತಿ ಪುಸ್ತಕವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ತಾವು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಬೇಕೆಂದು ಜಯಶ್ರೀ ಅವರು ಮನವಿ ಮಾಡಿದಾಗ ಅದಕ್ಕೆ ರಾಜ್‍ಕುಮಾರ್ ನಿರಾಕರಿಸಿದ್ದಾರೆ.
ಆರೋಗ್ಯ ಇಲಾಖೆಯ ಆಯುಕ್ತರು ಅಥವಾ ಕಾರ್ಯದರ್ಶಿಗಳಿಂದ ಲಿಖಿತವಾದ ಆದೇಶ ತಂದು ಅಧಿಕಾರ ವಹಿಸಿಕೊಂಡ ಬಳಿಕ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಅಲ್ಲಿಯವರೆಗೂ ನಾನು ಅವಕಾಶ ನೀಡುವುದಿಲ್ಲ ಎಂದು ಕುರ್ಚಿಯಲ್ಲಿ ಕುಳಿತು ದರ್ಪ ಪ್ರದರ್ಶಿಸಿದ್ದಾರೆ.
ತಾವು ರಜೆಯಲ್ಲಿದ್ದ ವೇಳೆಯಲ್ಲಿ ಯಾವುದೇ ಆದೇಶ ಇಲ್ಲದೆ, ಅಧಿಕಾರ ಹೇಗೆ ವಹಿಸಿಕೊಂಡಿರಿ ಎಂದು ಜಯಶ್ರೀ ಪ್ರಶ್ನಿಸಿದ್ದಾರೆ. ಕೆಎಟಿ ಆದೇಶವನ್ನು ಪರಿಗಣಿಸದೇ ವರ್ತಿಸುತ್ತಿರುವುದು ಸರಿಯಲ್ಲ ಎಂದು ಅವರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ನಿಮ್ಮ ಮೇಲೆ ಪೋರ್ಜರಿ ಪ್ರಕರಣ ದಾಖಲಾಗಿ, ದೋಷಾರೋಪಣ ಪಟ್ಟಿಯೂ ಸಲ್ಲಿಕೆಯಾಗಿದೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬೇಡಿ ಎಂದು ರಾಜ್
ಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ನೀವು ಉದ್ದೇಶಪೂರ್ವಕ ವಾಗಿಯೇ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿಸಿದ್ದೀರ ಎಂದು ಜಯಶ್ರೀ ಅವರು ಪ್ರತ್ಯಾರೋಪಿಸಿದ್ದಾರೆ. ಈ ಇಬ್ಬರ ನಡುವಿನ ವಾದ-ವಿವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
0 Response to ಒಂದೇ ಖುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ!! ವರ್ಗಾವರ್ಗಿ… ಅಧಿಕಾರಿಯ ಮೇಲೆ ಇನ್ನೊಬ್ಬ ಅಧಿಕಾರಿ ದರ್ಪ
Post a Comment