ಜೀವ ವಿಮೆ, ವಾಹನ ವಿಮೆ, ಆಸ್ತಿ ವಿಮೆ ಹೀಗೆ ಹಲವಾರು ಬಗೆಯ ವಿಮೆ ಇರುವುದನ್ನು ನಾವೇಲ್ಲ ಕೇಳಿದ್ದೇವೆ. ವಾಸ್ತವದಲ್ಲಿ ವಿಮೆ ಎಂದರೆ ಏನು, ಏತಕ್ಕಾಗಿ ವಿಮೆ ಮಾಡಿಸಬೇಕು, ನಮ್ಮ ದೇಶದಲ್ಲಿ ಲಭ್ಯವಿರುವ ವಿಮಾ ಸೌಲಭ್ಯಗಳು ಯಾವುವು ಎಂಬುದನ್ನು ಕೂಲಂಕುಷವಾಗಿ ಅರಿತುಕೊಳ್ಳುವುದು ಅಗತ್ಯ. ಹೀಗಾಗಿ ವಿಮೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮಗಾಗಿ ನೀಡಲಾಗಿದೆ.
ವಿಮೆ ಎಂದರೇನು..?
ಓರ್ವ ವ್ಯಕ್ತಿಯು ವಾರ್ಷಿಕ, ಮಾಸಿಕ ಅಥವಾ ತ್ರೈಮಾಸಿಕವಾಗಿ ಕಂತುಗಳಲ್ಲಿ ಹಣ ಪಾವತಿಸುವ ಮೂಲಕ ಇನ್ಸೂರೆನ್ಸ್ ಕಂಪನಿಯಿಂದ ವಿಮಾ ಪಾಲಿಸಿ ಕೊಳ್ಳುವುದು ಅಥವಾ ವಿಮೆಗಾಗಿ ಪರಸ್ಪರ ಒಪ್ಪಂದ ಮಾಡಿಕೊಳ್ಳುವುದನ್ನು ವಿಮೆ ಅಥವಾ ಇನ್ಸೂರೆನ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಇನ್ಸೂರೆನ್ಸ್ ಕಂಪನಿಯು ಪಾಲಿಸಿದಾರನಿಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಯಾವುದೋ ನಷ್ಟ ಅಥವಾ ಅಪಾಯದಿಂದ ಸುರಕ್ಷತೆ ನೀಡುತ್ತದೆ.
ವ್ಯಕ್ತಿಗಳು ವೈಯಕ್ತಿಕವಾಗಿ ಮಾತ್ರವಲ್ಲದೆ, ಸಾರ್ವಜನಿಕ ವಲಯದ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಸಹ ತಮ್ಮ ನೌಕರರ ಸುರಕ್ಷತೆಗಾಗಿ ವಿಮೆ ಕೊಂಡುಕೊಳ್ಳಬಹುದು. ಒಟ್ಟಾರೆಯಾಗಿ ವಿಮೆ ಎಂಬುದು ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ, ಅನಾರೋಗ್ಯ ಸಮಸ್ಯೆ, ಸಾವು, ಆಸ್ತಿ ಪಾಸ್ತಿಗಳ ಹಾನಿ ಮುಂತಾದ ಸಂದರ್ಭಗಳಲ್ಲಿ ಅಪಾಯ ನಿರ್ವಹಣೆ ಯೋಜನೆಯಾಗಿ ಕೆಲಸ ಮಾಡುತ್ತದೆ. ನಷ್ಟದ ಸಂದರ್ಭಗಳಲ್ಲಿ ಹಣಕಾಸಿನ ಮೂಲಕ ನೆರವು ನೀಡಿ ಒತ್ತಡ ಕಡಿಮೆ ಕಡಿಮೆ ಮಾಡುವ ಏಕೈಕ ಹಣಕಾಸು ಯೋಜನೆ ವಿಮೆ ಆಗಿದೆ.
ಭಾರತದಲ್ಲಿ ಲಭ್ಯವಿರುವ ವಿಮಾ ಯೋಜನೆಗಳು ದೇಶದಲ್ಲಿ ಹಲವಾರು ಬಗೆಯ ವಿಮಾ ಯೋಜನೆಗಳು ಲಭ್ಯವಿದ್ದು, ಪ್ರಮುಖ ವಿಮೆಯ ಪ್ರಕಾರಗಳು ಹೀಗಿವೆ.
ಜೀವ ವಿಮೆ
ವಾರ್ಷಿಕ, ಮಾಸಿಕ ಅಥವಾ ತ್ರೈಮಾಸಿಕವಾಗಿ ನಿರ್ದಿಷ್ಟ ಮೊತ್ತದ ಕಂತು ಪಾವತಿಸುವ ಮೂಲಕ ಪಾಲಿಸಿ ಪಡೆಯುವ ವ್ಯಕ್ತಿ ಹಾಗೂ ವಿಮಾ ಕಂಪನಿ ನಡುವಿನ ಪರಸ್ಪರ ಒಪ್ಪಂದವೇ ಜೀವ ವಿಮೆ ಯೋಜನೆಯಾಗಿದೆ. ಮುಂದೆ ಜೀವನದಲ್ಲಿ ಘಟಿಸಬಹುದಾದ ನಷ್ಟ, ಪಾಲಿಸಿದಾರ ಅಥವಾ ಅವರ ಅವಲಂಬಿತರ ಜೀವ ಹಾನಿ, ಆಸ್ತಿ ನಷ್ಟ ಮುಂತಾದ ಸಂದರ್ಭಗಳಲ್ಲಿ ವಿಮಾ ಕಂಪನಿಯು ಪಾಲಿಸಿದಾರನಿಗೆ ವಿಮೆಯ ಮೂಲಕ ಹಣಕಾಸು ಭದ್ರತೆಯನ್ನು ನೀಡುತ್ತದೆ. ಜೀವನದಲ್ಲಿ ಎದುರಾಗಬಹುದಾದ ವಿವಿಧ ಬಗೆಯ ಸಮಸ್ಯೆಗಳ ಸಂದರ್ಭದಲ್ಲಿ ವಿಮೆಯ ಮೂಲಕ ಹಣಕಾಸು ಸುರಕ್ಷೆ ನೀಡಲು ಹಲವಾರು ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಕಂಪನಿಗಳು ಅನೇಕ ರೀತಿಯ ವಿಮೆ ಯೋಜನೆಗಳನ್ನು ಒದಗಿಸುತ್ತಿವೆ. ಜೀವ ವಿಮಾ ಪಾಲಿಸಿಯಲ್ಲಿ ನಿಗದಿ ಮಾಡಲಾದ ಖಾತರಿ ಮೊತ್ತವನ್ನು ನಿವೃತ್ತ ಜೀವನದ ಭದ್ರತೆಗೆ, ಆರೋಗ್ಯ ರಕ್ಷಣೆಗೆ ಹೀಗೆ ಹಲವಾರು ವಿಧಗಳಲ್ಲಿ ಬಳಸಬಹುದು. ಜೀವ ವಿಮಾ ಪಾಲಿಸಿಗಳಲ್ಲಿ ರಿಸ್ಕ್ ಕವರ್ ಇರುವುದಿಲ್ಲ. ಆದರೆ ಇವುಗಳ ಮೇಲೆ ಸಾಲ ಪಡೆದುಕೊಳ್ಳಬಹುದು.
ಸಾವು ಸಂಭವಿಸಿದಾಗ ನಿರ್ದಿಷ್ಟ ಖಾತರಿ ಮೊತ್ತದ ಪಾವತಿ, ಪಾಲಿಸಿ ಮ್ಯಾಚುರಿಟಿ ಸಂದರ್ಭದಲ್ಲಿ ಮ್ಯಾಚುರಿಟಿ ಬೆನೆಫಿಟ್ ಹಾಗೂ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಜೀವ ವಿಮೆ ಒಳಗೊಂಡಿರುತ್ತದೆ. ಜೀವ ವಿಮೆಯಲ್ಲಿ 'ಸಂಪೂರ್ಣ ಜೀವ ವಿಮಾ ಯೋಜನೆ' ಹಾಗೂ 'ಅವಧಿ ಜೀವ ವಿಮಾ ಯೋಜನೆ' ಎಂಬ ಎರಡು ವಿಧಗಳಿವೆ.
ಆರೋಗ್ಯ ವಿಮೆ
ಆರೋಗ್ಯ ವಿಮೆ ಭಾರತದಲ್ಲಿ ಲಭ್ಯವಿರುವ ಮತ್ತೊಂದು ರೀತಿಯ ವಿಮೆ ಆಗಿದೆ. ಅನಾರೋಗ್ಯ ಅಥವಾ ಅಪಘಾತದಿಂದ ಆಸ್ಪತ್ರೆಗೆ ದಾಖಲಾದಾಗ, ವೈದ್ಯಕೀಯ ಶುಶ್ರೂಷೆ, ಶಸ್ತ್ರ ಚಿಕಿತ್ಸೆ, ವೈದ್ಯಕೀಯ ಸಲಹೆ, ರೋಗ ಪತ್ತೆ ಪರೀಕ್ಷೆ, ಆಂಬುಲೆನ್ಸ್ ಸೇವೆ, ಔಷಧ ಖರ್ಚು ಹೀಗೆ ವಿವಿಧ ಸಂದರ್ಭಗಳಲ್ಲಿ ಎದುರಾಗುವ ವೈದ್ಯಕೀಯ ಖರ್ಚುಗಳಿಂದ ಆರೋಗ್ಯ ವಿಮೆ ಸುರಕ್ಷತೆಯನ್ನು ನೀಡುತ್ತದೆ. ನಿಗದಿತ ಕಂತುಗಳಲ್ಲಿ ಪ್ರೀಮಿಯಂ ಹಣ ಪಾವತಿಸುವ ಒಪ್ಪಂದದೊಂದಿಗೆ ವಿಮಾ ಕಂಪನಿಯಿಂದ ಪಾಲಿಸಿ ಕೊಂಡರೆ ಈ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು. ಮುಂದೆ ಎದುರಾಗಬಹುದಾದ ಆರೋಗ್ಯ ಸಂಬಂಧಿ ಎಲ್ಲ ಖರ್ಚುಗಳನ್ನು ವಿಮಾ ಕಂಪನಿ ಭರಿಸುತ್ತದೆ. ನಿಯಮಿತ ಆರೋಗ್ಯ ತಪಾಸಣೆಗಳ ವೆಚ್ಚವನ್ನು ಸಹ ಕೆಲ ಕಂಪನಿಗಳು ಭರಿಸುತ್ತವೆ.
ಕಾರು ವಿಮೆ
ಕಾರು ಕೊಳ್ಳುವ ಸಂದರ್ಭದಲ್ಲಿ ಅದರೊಂದಿಗೆ ಉತ್ತಮ ಕಾರ್ ವಿಮೆ ಕೊಳ್ಳುವುದು ಜಾಣತನವಾಗಿದೆ. ದೊಡ್ಡ ಮೊತ್ತ ಖರ್ಚು ಮಾಡಿ ಕೊಂಡ ಕಾರು ದುರದೃಷ್ಟವಶಾತ್ ಅಪಘಾತಕ್ಕೆ ತುತ್ತಾದಾಗ ಅಥವಾ ಕಳೆದು ಹೋದಾಗ ಎದುರಾಗುವ ಪರಿಸ್ಥಿತಿ ನಿಭಾಯಿಸಲು ಕಾರು ವಿಮೆ ಅಗತ್ಯವಾಗಿದೆ. ಕೆಲವೊಮ್ಮೆ ನಮ್ಮದೇ ತಪ್ಪಿನಿಂದ ಅಪಘಾತ ಸಂಭವಿಸುತ್ತವೆ. ಇನ್ನು ಕೆಲ ಬಾರಿ ನಮ್ಮ ಕೈ ಮೀರಿದ ಸಂದರ್ಭಗಳಲ್ಲಿ ಅಪಘಾತಗಳು ಘಟಿಸುತ್ತವೆ. ಹೀಗೆ ಮಾನವ ಘಟಿತ ಅಥವಾ ಪ್ರಕೃತಿ ವಿಕೋಪ ಎರಡೂ ಸಂದರ್ಭಗಳಲ್ಲಿ ಸುರಕ್ಷತೆ ನೀಡಬಲ್ಲ ಕಾರ್ ವಿಮೆ ಕೊಂಡುಕೊಳ್ಳಬೇಕು.
ದ್ವಿಚಕ್ರ ವಾಹನ ವಿಮೆ
ಭಾರತದಲ್ಲಿ ಕಾರುಗಳಿಗಿಂತ ದ್ವಿಚಕ್ರ ವಾಹನಗಳ ಸಂಖ್ಯೆ ಅದೆಷ್ಟೋ ಪಟ್ಟು ಹೆಚ್ಚಾಗಿದೆ. ಹೀಗಾಗಿ ಟೂ ವೀಲರ್ ಇಟ್ಟುಕೊಂಡಿರುವ ಎಲ್ಲರೂ ತಮ್ಮ ವಾಹನಗಳನ್ನು ಪ್ರಕೃತಿ ಸಹಜ ಅಥವಾ ಮಾನವರಿಂದ ಆಗುವ ಅಪಘಾತಗಳಿಂದ ಸುರಕ್ಷತೆಗಾಗಿ ವಿಮೆ ಮಾಡಿಸುವುದು ಅತ್ಯಗತ್ಯವಾಗಿದೆ. ದೇಶದಲ್ಲಿನ ಬಹುತೇಕ ಎಲ್ಲ ವಿಮಾ ಕಂಪನಿಗಳು ದ್ವಿಚಕ್ರ ವಾಹನ ವಿಮಾ ಯೋಜನೆ ಹೊಂದಿವೆ. ಜೊತೆಗೆ ವಿಮೆಯ ನಿಬಂಧನೆಗಳ ಹೊರತಾಗಿ ಇನ್ನೂ ಕೆಲ ಹೆಚ್ಚುವರಿ ಸುರಕ್ಷತೆಯ ಸೌಲಭ್ಯಗಳನ್ನು ಸಹ ಗ್ರಾಹಕರಿಗೆ ನೀಡುತ್ತವೆ. ಅಪಘಾತ ಅಥವಾ ವಾಹನ ಕಳೆದು ಹೋದಾಗ, ಕೀಲಿ ಕೈ ಕಳೆದರೆ, ರಸ್ತೆಯಲ್ಲಿಯೇ ವಾಹನ ಕೈ ಕೊಟ್ಟಾಗ ರಿಪೇರಿ ಖರ್ಚು ಹೀಗೆ ಹಲವಾರು ರೀತಿಯ ಖರ್ಚುಗಳನ್ನು ವಿಮಾ ಕಂಪನಿಗಳು ಭರಿಸುತ್ತವೆ.
ಪ್ರವಾಸ ವಿಮೆ
ಪ್ರವಾಸ ಕೈಗೊಳ್ಳುವುದು, ಜಗತ್ತು ಸುತ್ತುವುದು ಬಹುತೇಕ ಜನರ ಅಚ್ಚು ಮೆಚ್ಚಿನ ಹವ್ಯಾಸವಾಗಿದೆ. ಹೀಗಾಗಿ ನಿಶ್ಚಿಂತೆಯಿಂದ ಪ್ರವಾಸ ಕೈಗೊಳ್ಳಲು ನೆರವಾಗಲು ಹಲವಾರು ರೀತಿಯ ಪ್ರವಾಸ ವಿಮೆಗಳನ್ನು ಕಂಪನಿಗಳು ನೀಡುತ್ತವೆ. ಪ್ರವಾಸದಲ್ಲಿರುವಾಗ ಬ್ಯಾಗ್ ಕಳೆದು ಹೋಗುವುದು, ಪಾಸ್‌ಪೋರ್ಟ್ ಅಥವಾ ಟ್ರಿಪ್ ಕ್ಯಾನ್ಸಲ್ ಆಗುವುದು ಅಥವಾ ಅನಾರೋಗ್ಯ ಉಂಟಾಗುವುದು ಹೀಗೆ ಅನೇಕ ತುರ್ತು ಪರಿಸ್ಥಿತಿಗಳಲ್ಲಿ ಪ್ರವಾಸ ವಿಮೆ ಆಪದ್ಬಾಂಧವನಾಗಿ ನೆರವಿಗೆ ಬರುತ್ತದೆ. ಈಗ ಆನ್ ಲೈನ್ ಮೂಲಕ ಪ್ರವಾಸ ವಿಮೆ ಖರೀದಿಸುವುದು ಅತ್ಯಂತ ಸುಲಭವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರವಾಸಿಗರು ವಿಮೆ ಕೊಳ್ಳುವ ಟ್ರೆಂಡ್ ಕಂಡು ಬರುತ್ತಿದೆ.
0 Response to ವಿಮೆ ಎಂದರೇನು? ಭಾರತದಲ್ಲಿ ಲಭ್ಯವಿರುವ ವಿವಿಧ ವಿಮಾ ಯೋಜನೆಗಳು ಯಾವುವು..?
Post a Comment