-->

Responsive Ads

Responsive Ads



7ನೇ ವೇತನ ಆಯೋಗದ ವರದಿ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಖಾಲಿ ಹುದ್ಧೆಗಳ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ



7ನೇ ವೇತನ ಆಯೋಗದ ಅಂತಿಮ ವರದಿ ಬಳಿಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗೆ ಹಾಗೂ ಹಾಗೆಯೇ ಖಾಲಿ ಇರುವ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಕುರಿತು ರಚಿಸಿರುವ ಏಳನೇ ವೇತನ ಆಯೋಗ ಅಂತಿಮ ವರದಿ ನೀಡಲು ಆರು ತಿಂಗಳ ಕಾಲಾವಕಾಶ ಕೋರಿದ್ದು, ಅಂತಿಮ ವರದಿ ಪರಿಶೀಲಿಸಿ ರಾಜ್ಯದ ಹಣಕಾಸು ಸ್ಥಿತಿಗತಿ ನೋಡಿಕೊಂಡು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ಏಳನೇ ವೇತನ ಆಯೋಗಕ್ಕೆ ಆರು ತಿಂಗಳ ಸಮಯ ನೀಡಲಾಗಿದೆ. ಈಗಾಗಲೇ ಮಧ್ಯಂತರ ಪರಿಹಾರ ಕೊಡಲಾಗಿದೆ ಆಯೋಗವೇ ಸಮಯ ಕೇಳಿರುವುದರಿಂದ ಸಮಯ ಕೊಟ್ಟಿದ್ದೇವೆ, ಅವರು ನೀಡುವ ವರದಿಯನುಸಾರ ನಿರ್ಧಾರ ಮಾಡಲಾಗುತ್ತದೆ ಎಂದರು.


ಕೇಂದ್ರದ ವೇತನ ಬೇರೆ, ಅವರು ಹತ್ತು ವರ್ಷಕ್ಕೆ ಒಮ್ಮೆ ವೇತನ ಆಯೋಗ ಮಾಡಲಿದ್ದಾರೆ. ನಾವು ಐದು ವರ್ಷಕ್ಕೆ ಮಾಡುತ್ತಿದ್ದೇವೆ, ಕೆಲವೊಮ್ಮೆ ಒಂದೆರಡು ವರ್ಷ ವ್ಯತ್ಯಾಸ ಆಗಿದೆ, ಆಯೋಗ ರಚನೆಗೂ ಮೊದಲು ವೇತನ ಸಮಿತಿ ಇತ್ತು. ಅದರ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಆಗುತ್ತಿತ್ತು, ಈಗ ಆಯೋಗದ ಅಂತಿಮ ವರದಿ ಬಂದ ನಂತರ ಅದನ್ನು ಪರಿಶೀಲಿಸಿ ಹಣಕಾಸು ಸ್ಥಿತಿಗತಿ ನೋಡಿಕೊಂಡು ಆಯೋಗದ ಶಿಫಾರಸು ಅನುಷ್ಠಾನಕ್ಕೆ ತರಲಿದ್ದೇವೆ. ಈಗಾಗಲೇ ಸರ್ಕಾರಿ ನೌಕರರಿಗೆ ಪೂರ್ವಾನ್ವಯವಾಗುವಂತೆ ಮಧ್ಯಂತರ ಪರಿಹಾರ ಕೊಡಲಾಗಿದೆ. ಈಗ ಅಂತಿಮ ವರದಿ ನೋಡಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.


ಐದು ಗ್ಯಾರಂಟಿ ಕೊಡುತ್ತಿದ್ದೇವೆ, ಕೊಡುತ್ತೇವೆ. ವೇತನ ಆಯೋಗದವರು ಸಮಯ ಪಡೆದಿದ್ದಾರೆ. ಅವರಿಗೆ ಈಗಲೇ ವರದಿ ಕೊಡಿ ಎನ್ನಲಾಗುತ್ತಾ? ವರದಿ ಬರುತ್ತಿದ್ದಂತೆ ಕ್ರಮ ವಹಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.


ಖಾಲಿ ಹುದ್ದೆ ಭರ್ತಿಗೆ ಕ್ರಮ: ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.33 ರಷ್ಟು ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಲಾಪದಲ್ಲಿ ಸದಸ್ಯ ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲ ಇಲಾಖೆಗಳಿಗೆ 7,72,025 ಹುದ್ದೆ ಮಂಜೂರಾಗಿದ್ದು, 5,16,105 ಹುದ್ದೆ ಭರ್ತಿಯಾಗಿವೆ. 2,55,920 ಹುದ್ದೆ ಖಾಲಿ ಹುದ್ದೆ ಖಾಲಿ ಇವೆ. ಸಿ ಅಂಡ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಎ ಮತ್ತು ಬಿ ಯಲ್ಲಿ ಅಪರೂಪಕ್ಕೆ ಹೊರಗುತ್ತಿಗೆ ಮಾಡಲಿದ್ದೇವೆ. ಸದ್ಯ ಹುದ್ದೆಗಳು ಖಾಲಿ ಇರುವುದು ನಿಜ, ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ, ಅದರಂತೆ ಭರ್ತಿ ಮಾಡುತ್ತೇವೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇವೆ, ಆದ್ಯತೆ ಮೇಲೆ ಭರ್ತಿ ಮಾಡಲಿದ್ದೇವೆ. ಎಲ್ಲ ಇಲಾಖೆಗಳಲ್ಲಿ ಹುದ್ದೆ ಖಾಲಿ ಇರುವುದು ನಿಜ, ಇದು ನಮ್ಮಿಂದ ಆದ ಕಾರಣವಲ್ಲ, ಹಲವು ವರ್ಷದಿಂದ ಖಾಲಿ ಬಿಟ್ಟ ಕಾರಣ ಈಗ ಹೆಚ್ಚಾಗಿದೆ, ನಾವು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ ಎಂದರು.


ಕೆಆರ್​ಎಸ್ ಬಳಿ ಡಿಸ್ನಿ ಲ್ಯಾಂಡ್ ಮಾದರಿ ಉದ್ಯಾನ: ರಾಜ್ಯದಲ್ಲಿ ಮನರಂಜನಾ ತಾಣವಿಲ್ಲ. ಹಾಗಾಗಿ ಮೈಸೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಡಿಸ್ನಿ ಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಅಲ್ಲಿ ಸರ್ಕಾರಿ ಜಾಗ ಖಾಲಿ ಇದೆ, ಕೆಆರ್​ಎಸ್ ಅಣೆಕಟ್ಟಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ, ಮೈಸೂರಿನ ಕೆಆರ್​ಎಸ್ ಅಣೆಕಟ್ಟೆ ಸಮೀಪದ ಜಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಿದ್ದೇವೆ. ಎಲ್ಲರಿಗೂ ಉಪಯೋಗ ಆಗಬೇಕು ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸರ್ಕಾರ ಈ ಅಭಿವೃದ್ದಿ ಕಾಮಗಾರಿ ನಡೆಸಲಿದೆ ಎಂದರು.


ಕಾರಂಜಾ ಡ್ಯಾಂ ಬಳಿ ಹೆಚ್ಚುವರಿ ಬ್ಯಾರೇಜ್ ಪ್ರಸ್ತಾಪವಿಲ್ಲ: ಕಾರಂಜಾ ಜಲಾಶಯದ ವ್ಯಾಪ್ತಿಯಲ್ಲಿ ಹೆಚ್ಚುವರಿ ನೀರು ಸಂಗ್ರಹ ಮಾಡಲು ಹೊಸದಾಗಿ ಯಾವುದೇ ಬ್ಯಾರೇಜ್ ನಿರ್ಮಾಣ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಅವರು, 27 ಸಾವಿರ ಹೆಕ್ಟೇರ್​​ಗೆ ನೀರಾವರಿ ಯೋಜನೆ ಕಲ್ಪಿಸುವ ಕಾರಂಜಾ ಜಲಾಶಯ ಕಳೆದ 9 ವರ್ಷದಲ್ಲಿ ಒಂದು ಬಾರಿ ಮಾತ್ರ ತುಂಬಿದೆ.‌ 2021 ರಲ್ಲಿ ಮಾತ್ರ ತುಂಬಿದ್ದು ಬಿಟ್ಟರೆ ಮತ್ತೆ ತುಂಬಿಲ್ಲ ಹಾಗಾಗಿ ಹೆಚ್ಚುವರಿ ನೀರು ಹೊರ ರಾಜ್ಯಕ್ಕೆ ಹೋಗುತ್ತದೆ ಎನ್ನುವುದು ಸರಿಯಲ್ಲ, ಡ್ಯಾಂ ವಿಸ್ತರಣೆ ಕುರಿತು ಪರಿಶೀಲಿಸಿ ಶೇಖರಣಾ ಸಾಮರ್ಥ್ಯ ಹೆಚ್ಚಿಸುವ ಚಿಂತನೆ ಮಾಡಲಾಗುತ್ತದೆ, ಸದ್ಯಕ್ಕೆ ಹೆಚ್ಚುವರಿ ಬ್ಯಾರೇಜ್ ನಿರ್ಮಿಸುವ ಪ್ರಸ್ತಾಪ ಇಲ್ಲ ಎಂದರು.

0 Response to 7ನೇ ವೇತನ ಆಯೋಗದ ವರದಿ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಖಾಲಿ ಹುದ್ಧೆಗಳ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

Post a Comment

Advertise